ಮಂಗಳವಾರ, ಏಪ್ರಿಲ್ 25, 2023

ಹಕ್ಕಿಯ ಬದುಕು

.

ಹಕ್ಕಿಯ ಬದುಕು


ಬಲಿತು ಬರಲು ಆಗತಾನೆ

ಬಣ್ಣ ಬಣ್ಣದ ರೆಕ್ಕೆಗಳು

ಬೆಟ್ಟವೇರಲು ,ಕಣಿವೆ ದಾಟಲು

ಮೋಡದೊಳಗೆ ಸುಳಿಯುವಾಸೆಯು

ಹೊಸದು ಬದುಕಿಗೆ ಕರೆಯುತ್ತಿದ್ದವು

ಸಾವಿರೊಂದು ಕನಸುಗಳು!


ಅವನು ಬಂದು ಹೀಗೆ ಅಂದ...

ಬಯಲು ಸಾಲದು, ಗಗನ ಕಿರಿದು;

ಬೇಕು ನಿನಗೆ  ಬೃಹದು ಜಗವು!

ಬಂದು ನಿಲ್ಲು ಎನ್ನ ಹಿಡಿಯೊಳು

ಕಣ್ಣ ಮುಚ್ಚೆ ಕಾಣ ಸಿಗುವುದು.


ಕಿವಿಗೆ ಕೇಳದು ಒಳಿತು ಮಾತು

ಸ್ಪರ್ಶ ಮಾತ್ರದಿ ಮರೆತೆನೆಲ್ಲವ 

ಕುರುಡು ಪ್ರೀತಿ ಸೊಬಗ ಮಾಯೆ!

ರೆಪ್ಪೆ ತೆರೆಯೆ ಬಂಧಿ ನಾನು

ಮಹಲ್ಗಳ್ಮೇಲ್ಗಣ ಕಂಬಿಯೊಳ್


ಎನಿತು ಕರೆದರು ಆರು ಬರರು

ಗೋಡೆಗಟ್ಟಿದೆ ಸುತ್ತಲೂ 

ನಿಜವನರಿಯಲು ಕ್ಷಣವನಿತ್ತೆ....

ತುತ್ತು ಅನ್ನಕೆ ಕೈಯನೀಯುವ

-ವರೆಗೆ  ಬಂದಿತೆನ್ನೆಯ ಪಾಡು 


ಹರೆಯ ಸುರಿದ ಹಗಲುಗನಸ

(ಈಗ)ನೆನೆದು ಗದ್ಗದಗೊಂಡೆನು 

ರೆಕ್ಕೆ ಎರಡನು ಮುರಿದು ಹಾಕಿ

ಬಿಕ್ಕಿ ಅಳುತಲೆ ಕುಂತೆನು 

ಸುತ್ತ ಕತ್ತಲೆ ಕವಿಯುತಿರಲು 

ಕರಗಿ ಹೋದೆನು ಅಲ್ಲಿಯೇ.....


                             - ಕಾವ್ಯಮಯಿ 


























ಶುಕ್ರವಾರ, ಜೂನ್ 26, 2020

ಅಮ್ಮಾ...

    

ಅಮ್ಮಾ ನಾನು ನಿನ್ನೊಳಗೆ
 ಬೆಚ್ಚಗೆ ಮಲಗಿದ್ದೆ;
 ನಿನ್ನ ಹೃದಯದ ಬಡಿತವೇ
 ನನಗೆ  ಸಂಗೀತವಾಗಿದ್ದು
ಅದ ಕೇಳುತ್ತಾ ಬೆಳೆಯುತ್ತಿದ್ದೆ
ನಿನ್ನ ರಕ್ಷೆಯಲಿ ನಾನು
ಎಂದೂ ಸುರಕ್ಷಿತವಾಗಿದ್ದೆ .

ಅಲ್ಲಿ ಭಯವಿರಲಿಲ್ಲ,
ನೀನು ನನ್ನ ತುಂಬಾ ಇಷ್ಟಪಡುತ್ತಿದ್ದೆ
 ನನಗದಷ್ಟೇ ತಿಳಿದಿತ್ತು.
ನನಗೆ ಹಸಿವಾದಾಗೆಲ್ಲ
 ನೀನು ಹೊಟ್ಟೆ ತುಂಬ
 ಉಣ್ಣಲು ಕೊಡುತ್ತಿದ್ದೆ
ನಾನು ಹಾಯಾಗಿದ್ದೆ.

 ಬಣ್ಣ ಬಣ್ಣದ ನವಿರಾದ
 ಕನಸುಗಳ ಹೆಣೆಯುತ್ತಿದ್ದೆ
ಅಮ್ಮ ನೀನು ಹೇಗಿರುವೆಯೆಂದು
ನಾನೂ,  ನಾನು ಹೇಗಿರುವೆಯೆಂದು
ನೀನೂ ಅರಿಯಲಾರೆವು !
ಆದರೂ ನಮ್ಮೊಳಗಿನ
ಮಧುರ ಬಾಂಧವ್ಯ
ಎಲ್ಲವನ್ನೂ ಮೀರಿದ್ದು
ನಾನು ಖುಷಿಪಡುತ್ತಿದ್ದೆ !

ಆದರಿಂದೇನಾಯಿತಮ್ಮ !!?
ಅಮ್ಮಾ.....  ನನ್ನ ಮಾತು ಕೇಳುತಿದೆಯೇ?
ಏಕೆ ಭಯಗೊಂಡಿರುವೆ
ನಿನ್ನೆದೆ ಬಡಿತವು ಬಲು ಹೆಚ್ಚಾಗಿದೆ
ಏಕೆ ಈ  ತಳಮಳ
ಅಳುತಿರುವೆಯೇನು?
ದೇವೆರನೇಕೆ ನೆನೆಯುತಿರುವೆ?

ಅದೇನು ಸ್ಫೋಟ? ಹಾ !!?
ಅಯ್ಯೋ....  ರಕ್ತ.....
ರಕ್ತ ಜಿನುಗುತ್ತಿದೆ....
ಮಾತಾಡು.....
ಏನಾಗುತ್ತಿದೆ ನಿನಗೆ...?
 ಹೇಳಲಾರೆಯೇನು?


ನನಗೆ ಸಂಕಟವಾಗುತಿದೆ
ನನ್ನ ಕೂಗು ಕೇಳುತಿಲ್ಲವೇ
ನನ್ನ ಮೇಲಿನ ಮಮತೆ ಮರೆತಿಯೇನು?
ನನ..ಗೆ ಉ..ಸಿರು.. ಕಟ್ಟು..ತಿದೆ..
ಅ..ಮ್ಮಾ... ಕಾ..ಪಾಡು..
...........
ಅಮ್ಮಾ.........
           
              - ಕಾವ್ಯಮಯಿ

ಮಂಗಳವಾರ, ಮೇ 19, 2020

ನಿನ್ನ ನೆನಪು

 ನಿನ್ನ ನೆನಪು

 ನಿನ್ನ ಇರುವನ್ನು ನಾನುಕಂಡೆ
 ನಿನ್ನಿಂದ ದೂರವಿದ್ದು
 ಸುತ್ತಮುತ್ತ ಸುಳಿವ ನೆನಪ
 ನೆಪವಾಗಿ ಕಾಡುತ್ತಿದ್ದು

 ಇಹುದು ಬಯಕೆ ನೂರು
 ಬಳಿಬಂದು ತಬ್ಬಿಕೊಳ್ಳು
 ಪ್ರೇಮದಲೆಯಲಿಂದು ಮಿಂದು
 ಮನಸ ತುಂಬಿಕೊಳ್ಳು

 ತಾಳೆನಿನ್ನು  ವಿರಹ ವ್ಯಥೆಯ
 ಬದುಕ ಗತಿ ಅಗೋಚರ
 ಕಾಲವಿರುತ  ಗೆಳೆಯ ನೀನು
 ಬಂದು ಸೇರು ಹತ್ತಿರ
                   
                  -ಕಾವ್ಯಮಯಿ

ಬುಧವಾರ, ಮೇ 13, 2020

ಕವನದ ಹುಟ್ಟು

ಮನದ ಮೂಲೆಯಲ್ಲಿ
ಕವಲೊಡೆದ ಕನಸಿಗೆ
ಅಕ್ಷರದ ರೂಪಕೊಟ್ಟು
ಹಾಳೆಯೊಳಗಿಳಿಸಿ
ನಗುವೊಂದು ಮೂಡಲು
ಹುಟ್ಟಿತೆನ್ನ ಕವನ

ಪ್ರಾಸ ಸಮಾಸಾದಿಗಳ
ಅಲಂಕಾರ ಶೃಂಗಾರ
ಬೇಕೊ? ಬೇಡವೋ !
ಎಂದೆಣಿಸುತಲೇ
ನವಜಾತ ಶಿಶುವಂತೆ
ಹುಟ್ಟಿತೆನ್ನ ಕವನ

ಬಹುದಿನದ ಬಯಕೆಗೆ
ಮಡುಗಟ್ಟಿದ ಕೈಗೆ
ಜೀವವನು ತುಂಬಿ
ಹಳೆಯ ನೆನಪುಗಳ
ಜೊತೆಯಲ್ಲಿ ಹೊಸೆಯುತ
ಹುಟ್ಟಿತೆನ್ನ ಕವನ
                 -ಕಾವ್ಯಮಯಿ


ಭಾನುವಾರ, ಮೇ 3, 2020

ಮೌನಕ್ಕೆ ಶರಣಾಗಿ.




ಅಕ್ಕರಗಳ ಆಸುಪಾಸು ಹೊಕ್ಕು ಒಂದಷ್ಟು
ಬಿತ್ತರಗಳ ತರಗೆಲೆಗಳು
ಗಿರಕಿ ಹೊಡೆದಂತೆ ;ಬಿರುಗಾಳಿ ಬರುತೆನಲು
ಮೌನಕ್ಕೆ ಶರಣಾಗಿ.
ಕವಿಯುತ್ತ ನಿಶ್ಶಬ್ಧ
ತಣ್ಣಗಾಗುವ ತೆವಲು
ಮತ್ತೆ ಸವಿಗಾಳಿಗೆ ಮೈಯೊಡ್ಡಿ
ಮೊಗವರಳಿ ಸವಿಯುತ್ತಾ ಸಾಗಿ
ಮೌನಕ್ಕೆ ಶರಣಾಗಿ.
ಆ ಗಾಳಿ ಗಂಧದೊಳು ಮಿಂದೆದ್ದು
ಲೇಖನಿಗೆ ಇಳಿಯಿಸುತ
ಮತ್ತೆ ಅಕ್ಕರಗಳ ನಡುವೆ
ಮೌನಕ್ಕೆ ಶರಣಾಗಿ. 
                         - ಕಾವ್ಯಮಯಿ


ಶನಿವಾರ, ಮೇ 9, 2015

ಕನಸಿನ ಚಿಟ್ಟೆ















ಕನಸಿನಲ್ಲಿ  ಕಂಡೆ ನಿಂದು
ಬಣ್ಣ ಬಣ್ಣದ ಚಿಟ್ಟೆಯೊಂದು
ಕಣ್ಣಲ್ಲೇ ಮನಸೋತೆ
ಹಿಡಿಯಲು ನಾ ಹೊರಟೆ

ಘಮ ಘಮದ ಹೂವಿನತ್ತ
ನೆಟ್ಟಿತಲ್ಲ  ಚಿಟ್ಟೆ ಚಿತ್ತ
ಮಧುವನ್ನು ಹೀರುತ್ತಾ
ಮುನ್ನಡೆದಳು ಬಳುಕುತ್ತಾ

ಕಣ್ಣ ಮುಚ್ಚೆ ಆಡಿಕೊಂಡು
ನನ್ನ ಮೋಹ ನೋಡಿಕೊಂಡು
ಮಾಯೆಯಾದಳು ಮಾಯಾಂಗನೆ
ನೋಡನೋಡ್ತಿದ್ದಂಗೆನೇ...

ನನ್ಮೊಗದ ನಗುವಳಿದು
ಹೃದಯವೆಲ್ಲ ನೋವುಂಡು
ನಿಂತಲ್ಲೇ ನಿಂತೋದೆ
ಎಲ್ಲಿಗೆ ನೀ ಹೋದೆ?

ಮೆಲ್ಲನೆನ್ನ ಕಣ್ಣ ನೀರ
ಕಂಡು ಚಿಟ್ಟೆ ಕನಿಕರ
ಓಡೋಡಿ ಬಂದವಳೇ
ತಬ್ಬಿಕೊಂಡ್ಬಿಟ್ಟವಳೇ !!

ಕಣ್ತೆರೆದು ಕಾಣಲಾಗಿ
ಕತ್ತಲೆಲ್ಲ ಬೆಳಕಾಗಿ
ಕನಸೆಲ್ಲಾ ಒಡೆದು ಬಿತ್ತು
ಚಿಟ್ಟೆಯ ಸಿಹಿ ಮುತ್ತಲ್ಲಿ ...!! :)


                                          - ಕಾವ್ಯಮಯಿ

ಮಂಗಳವಾರ, ಸೆಪ್ಟೆಂಬರ್ 16, 2014

ತವರು ಮನೆ ಚಿಂತೆ

ವರುಷವೆರಡಾಯಿತು
ಹಬ್ಬಕ್ಕೆ ತವರಿಗೆ ಹೋಗಿಲ್ಲ
ಚೌತಿ, ಪಂಚಮಿ, ಷಷ್ಠಿ , ಅಷ್ಟಮಿ, ನವಮಿ
ಹಬ್ಬಗಳಲ್ಲ ದಿನಗಳಂತೆ ಜಾರಿಹೋಗಿಯಲ್ಲ ..
ಹಸುವು ಹಡೆದಿದೆಯಂತೆ; ನಾಯಿ ಕಳೆದಿದೆಯಂತೆ;
ತಂಗಿಯನು ನೋಡಲು ವರ ಬರುವನಂತೆ.
ಅಮ್ಮನಿಗೆ ಸೌಖ್ಯವು  , ಅಪ್ಪನಿಗೆ ಮೀನ್ಸಾರು
ಇಲ್ಲವೆನ್ನಲು ಸಾಮ್ಯತೆಯದೆ ಗೊಂದಲ
ಪದ್ಮಿನಿಯು ಬಸುರಂತೆ ; ಮಾವಮಿಡಿ ಚಿಗುರಂತೆ ;
ಬಳೆಗಾರ್ತಿ ಹೊಸಬಗೆಯ ಬಳೆ ತರುವಳಂತೆ
ಎರಡೇ ದಿನ ಹೋಗಿ ಬರಲೆನ್ನ ಹಂಬಲ
ವರುಷವೆರಡಾಯಿತು
ಹಬ್ಬಕ್ಕೂ ತವರಿಗೆ ಹೋಗಿಲ್ಲ


                                                 -ಕಾವ್ಯಮಯಿ