ಭಾನುವಾರ, ಸೆಪ್ಟೆಂಬರ್ 15, 2024

ಮರೆಯಲಾರದ ಮಧುರ ಸ್ವರಗಳು 

  ಫ್ರೀ ಆಗಿ ಇದ್ದೀವಂತ ಇನ್ಸ್ಟಾಗ್ರಾಮ್  ನೋಡಿ ಸಮಯದ ಸದುಪಯೋಗ ಮಾಡ್ತಿದ್ದಿವೇನೋ ಅನ್ನೋ ತರ ಕಾಲ. ಒಂಥರಾ ಚಟನೇ ಅಂತಾಗಿಬಿಟ್ಟಿದೆ. ಗಂಟೆಗಟ್ಟಲೆ ನೋಡ್ತೀರ್ತೀವಿ ಅಲ್ವೇ. ಹೀಗೆ ನೋಡ್ತಾ ನೋಡ್ತಾ ಅವತ್ತು ಸಡನ್ನಾಗಿ ಸಿಕ್ಕಿದಂಥ ಹಾಡು "ವಸಂತಿ ನಲಿವಾಗ...... ಹಸಿರುಟ್ಟು ಬರುವಾಗ......" .
ವಾಹ್ ಎಂತಾ ಸೊಗಸಾದ ಹಾಡಲ್ವೇ!!
ಕೇಳೋ ಕಿವಿಗೆ ಅದೆಷ್ಟು ತಂಪು.
ಪಿ. ಬಿ ಶ್ರೀನಿವಾಸರು, ಪಿ. ಸುಶೀಲಾ ಹಾಡಿರೋ ಕಸ್ತೂರಿ ನಿವಾಸದ ಹಾಡನ್ನ ಮತ್ತೆ ಹೊಸತನ ಕೊಟ್ಟು ಕೇಳುದು ಎಷ್ಟು ಚೆಂದ ಅಲಾ... 
ಹಳೆಯ ನೆನಪೇ ಮತ್ತೆ ಕಣ್ಣಾ ಮುಂದೆ ಬಂದಂತಾಯ್ತು.
ಸಣ್ಣoದಿನಲ್ಲಿ  ರೇಡಿಯೋದಲ್ಲಿ, ಆಮೇಲೆ ಟಿವಿ ಚಿತ್ರಮಂಜರಿಯಲ್ಲಿ ಮಾತ್ರ ಕೇಳುತ್ತಿದ್ದ ಇಂಪನ್ನು ಕೇಳಿದ್ದು ಬಹಳ ಖುಷಿ ಅನಿಸಿತು.
ಪೂರ್ತಿ ಹಾಡನ್ನು ಹುಡುಕಿ  ನೂರಾರು ಬಾರಿ ಅದನ್ನೇ ಮತ್ತೆ ಮತ್ತೆ ಕೇಳಿ, ಯಾರೂ ಇಲ್ಲದಿದ್ದಾಗ ಹತ್ತಾರು  ಬಾರಿ  ಹಾಡಿದೆ.
ಮತ್ತೊಂದು ಬಾರಿ ಹಿಂದಿಯ ಹಾಡೊಂದು ಬಹಳ ಇಷ್ಟವಾಯ್ತು ."ಯೇ ಕ್ಯಾ ಬಾತ್ ಹೈ ಆಜ್ ಕೀ ಚಾಂದಿನಿ ಮೇ...." ಲಿರಿಕ್ಸ್ ಬರ್ಕೊಂಡು ಹಾಡಿದ್ದೇ ಹಾಡಿದ್ದು ... 
ಕೊನೆಗೆ  ಹಳೆಯ ಹಾಡುಗಳನ್ನು , ಅವನ್ನೇ ಹೊಸಧಾಟಿ ಯಲ್ಲಿ ಕಲೀತಾ ನನ್ನೇ ಮರೆತು ಬಿಡ್ತಿದ್ದೆ.!
ಒಂದಿನ ಮ್ಯಾನೇಜರ್ ಕೈಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಫಜೀತಿ ಪಾಡ್ಕೋಬೇಕಾಗಿತ್ತು ಸದ್ಯ ' ತುಂಬಾ ಚೆನ್ನಾಗಿ ಹಾಡ್ತೀರಲ್ರಿ,  ಮೀಟಿಂಗು , ಫoಕ್ಷನ್ನು ಬಂದ್ರೆ ಹಾಡಿ ' ಅಂತ ಜೋಶ್ ತುಂಬಿದ್ರು. 
ಇಂಥಾ ಸ್ಥಾನ ,ಅನುಭವ ತಂದ ಹಳೆಯ ಹಾಡುಗಳಿಗೆ ನನ್ನದೊಂದು ನಮನ.
ಬನ್ನಿ ಕೇಳೋಣ, ಕೇಳಿ ಹಾಡೋಣ 
ಹಳೆಯ ನೆನಪಿನ  ಹಾಡುಗಳನ್ನ. 



                                       - ಕಾವ್ಯಮಯಿ 

.

ಸೋಮವಾರ, ಸೆಪ್ಟೆಂಬರ್ 9, 2024

ಓ ದೀಪವೇ ಕೇಳಿಲ್ಲಿ ..

ಓ ದೀಪವೇ ಕೇಳಿಲ್ಲಿ...  

ಯಾರೋ ಹಚ್ಚಿಟ್ಟು ಹೋದ ಮೇಲೆ 
ತೃಣವಿರುವವರೆಗೆ 
ತನ್ನ ಜೀವವನ್ನು ಸುಟ್ಟು 
ಪರರ ಬಾಳು ಬೆಳಗುವಂಥದ್ದು 
ಸುಲಭ ಮಾತಲ್ಲದ ಕೆಲಸ.

ಕಣ್ಣಿದ್ದವಗೆ ಕಣ್ಣಾಗುವಂತೆ
ಕಣ್ಣಿಲ್ಲದವನನೂ ಕಾಣಿಸುವಂತೆ
ಜಗದ ಸತ್ಯಗಳನರಿತು
ದೊಡ್ಡುಸಿರನೆಳೆದು ಕೊನೆಗೊಮ್ಮೆ
ಕಾಯ ಬಿಟ್ಟಂತೆಯೇ 
ನಿನ್ನ ಕಾಯಕ ಮುಗಿಯುತ್ತದೆ.


ನೀನೆಷ್ಟೇ ಪ್ರಕಾಶಮಾನವಾಗಿ ಬೆಳಗಿದರೂ
ಕತ್ತಲಿದ್ದರೆ ಮಾತ್ರವೇ ಬೆಲೆಯು!
ಯಾರ್ಯಾರಿಗೋ ದಿಕ್ಕುತಪ್ಪದಂತೆ 
ಸರಿದಾರಿ ತೋರಿದ 
ನಿನ್ನ ಕಾಳ್ಕೆಳಗೆ ಕವಿದಿರುವುದ
ಕಾಣದಷ್ಟು ಕುರುಡಾದೆಯ?

ನಿನ್ನ ನೆನಪಿಡುವುವುದಕೆ ಯಾರಿಗೂ 
ಇಲ್ಲಿ ಸಮಯವಿಲ್ಲ 
ನೀನುರಿದು ಮೆರೆದದ್ದು ಎಷ್ಟು ಹೊತ್ತು?
ಕಾರ್ಮೋಡ ಕವಿದಂಥ 
ಲೋಕದ ಜಂಜಡವ
ಶಾಶ್ವತವಾಗಿ ಮರೆಸಲಾದೀತೆ !? ನಿನ್ನಿಂದ? 

ಓ ದೀಪವೇ ಕೇಳಿಲ್ಲಿ,
ಜೋರಾದ ಗಾಳಿಗಳಿಗೆ ಲೆಕ್ಕಿಸದೆ
ಆರಿಸುವ ಜಲಪ್ರಳಯಗಳಲಿ 
ಒಬ್ಬಂಟಿ ನಲುಗದೇ 
ಮೊದಲು ನೀ ಗೆದ್ದು ನಿಲ್ಲು 
ಬೆಳಕನ್ನು ನಿನ್ನಂಗಳದಿ
ಒಂದಿಷ್ಟಾದರೂ ಚೆಲ್ಲು!

                 -   ಕಾವ್ಯಮಯಿ 






ಗುರುವಾರ, ಮೇ 9, 2024

                    ಒಂದು ಲಾಟರಿ ಕಥೆ

ರಂಗ ಕಳೆದವಾರ ಕೊಂಡಿದ್ದ ಲಾಟರಿ ಟಿಕೆಟ್ ನಂಬರ್ ಗೆ ಒಂದು ಕೋಟಿ ಬಹುಮಾನ ಬಂದಿದೆ. ಆದರೆ ಟಿಕೆಟ್ ಎಲ್ಲಿಟ್ಟಿರುವೆ ಎಂದು ಹುಡುಕುತ್ತಿದ್ದಾನೆ. ಹೆಂಡತಿ ಪದ್ಮಳನ್ನ ಕರೆದು 

' ಲೇ ಇವಳೇ ಟಿಕೆಟ್ ಸಿಕ್ತೇನೆ?' ಎಂದ. ಅವಳು ' ಯಾವ ಟಿಕೆಟ್ ರೀ?' ಅಂದ್ಲು.

' ಅದೇ ಕಣೆ ಮೊನ್ನೆ ಕೇರಳ ಹೋಗಿದ್ದಾಗ ತಗೊಂಡಿದ್ವಲ್ಲೇ? '

' ನಂಗೇನ್ರಿ ಗೊತ್ತು, ಅಲ್ಲೇ ಎಲ್ಲೋ ಟೇಬಲ್ ಮೇಲಿರ್ಬೇಕು, ಸರಿಯಾಗ್ ನೋಡಿ '

'  ಒಂದು ಕೋಟಿ ಬಂದಿದ್ಯೆ ಅದಿಕ್ಕೆ....'

' ಹಾಂ! ಒಂದ್ ಕೋಟಿನಾ? '

' ಹೌದೆ ಈಗ್ ತಾನೆ ನೋಡ್ದೆ '

' ನಂಬರು ಸರಿಯಾಗಿದೆ ತಾನೇ?' 

' ಲೇ ಏನೇ ಅಂತಿಯಾ? ಸುಮ್ನೆ ಹುಡುಕೆ ' 

      ಏನೋ ನೆನಪಾದಂತೆ ಬೈಕ್ ಏರಿ ಹೊರಟ. ತನ್ನ ಕಂಪೆನಿಯ ಸೆಕ್ಯೂರಿಟಿಗೆ ಅರ್ಜೆಂಟಾಗಿ ಬರಬೇಕೆಂದು ತಾಕೀತು ಮಾಡಿದ. ಅಲ್ಲಿ ತಲೆಕೆಳಗಾಗಿ ಹುಡುಕಿದ್ರು ಟಿಕೆಟ್ ಸಿಗಲಿಲ್ಲ. ನೆಲ ನೋಡ್ತಾ ಮತ್ತೆಲ್ಲಿ ಇಟ್ಟಿರ್ಬಹುದು ಎಂದು ಯೋಚಿಸಲಾಗಿ ಅವೊತ್ತು ಕೇರಳದಲ್ಲಿ ಫಂಕ್ಷನ್ ಗೆ ಹಾಕಿದ್ದ ಡ್ರೆಸ್ಸಿನಲ್ಲೇನಾದ್ರೂ ಉಳಿದಿದ್ಯ ಎಂದು ಬೆಳಗಷ್ಟೇ ಡ್ರೈ ವಾಷಿಗೆ ಕೊಟ್ಟಿದ್ದ ಬಟ್ಟೆರಾಶಿಯೆಲ್ಲ ಅಡಿಮೇಲು ಮಾಡಿ ಏನೂ ಸಿಗದೆ ಸಪ್ಪೆಮೋರೆ ಹಾಕಿಕೊಂಡು ಬಂದ. 

' ಇನ್ನೆಲ್ಲಿಟ್ಟಿರ್ಬಹುದಪ್ಪ? '

' ಬಂದ್ರೆ ಒಂದು ಕೋಟಿ '

' ಛೆ ಹಾಳಾದ್ದು, ಮಹಾಲಕ್ಷ್ಮಿಯೇ ಮನೆಬಾಗಿಲಿಗೆ ಹುಡುಕ್ಕೊಂಡು ಬಂದಿರುವಾಗ ಟಿಕೆಟ್ಟು ಕಾಣ್ತಾ ಇಲ್ವೆ...

 ' ನಿಮ್ ಬ್ಯಾಗು, ಸ್ಕೂಟರ್ರು, ಕಪಾಟು ಹುಡುಕಿದ್ರೆನ್ರಿ?'

'ಕಪಾಟು ಗೀಪಾಟು ಮೇಜು ಕುರ್ಚಿ ಕಡೆಲೂ ಇಲ್ಲ ' ಕೋಪದಿಂದ ಅವನೆಂದ '

'ನಂಗ್ಯಾಕೋ ತಲೆ ತಿರುಗ್ತಾ ಇದೆ ... ಒಂದು ಕೋಟಿ.. ಅಯ್ಯೋ...' 

' ರೀ ಬಿಪಿ ರೈಸ್ ಮಾಡಿಕೊಂಡಿದ್ದಿರಲ್ರೀ.. ಇರಿ ಮಾತ್ರೆ ತರ್ತೀನಿ. ತಿಂದು ಮಲ್ಕೊಳ್ಳಿ ' ಪದ್ಮ ಅಂದ್ಲು 

ಹಾಗೆ ಮಾಡಿ ನಿದ್ದೆಗೆ ಜಾರಿದ ರಂಗ ಬೆಳಿಗ್ಗೆ ಕಣ್ ಬಿಟ್ಟು ಮತ್ತೆ ' ಸಿಗ್ತೇನೆ?' ಅಂದ.

' ಏನ್ರೀ ಅದು ' 

' ಅದೇ ಕಣೆ ಲಾಟ್ರಿ ಟಿಕೆಟ್ಟು....... ' 

' ಯಾವ ಲಾಟ್ರಿ ರೀ? '

' ನಿನ್ನೆಯಿಂದ ಹುಡುಕ್ತಾ ಇದ್ವಲ್ಲೇ, ಒಂದ್ ಕೋಟಿ ಲಾಟ್ರಿ? ಅಂತ ಮುಖ ಸಣ್ಣ ಮಾಡಿ ಹೇಳಿದ

' ಎದ್ದೇಳ್ರಿ, ಟೀಕೆಟಂತೆ ಟಿಕೆಟ್ಟು, ಎಲ್ಲೋ ದುಡ್ಡಿನ ಮಳೆ ಬೀಳೋ ಕನಸು ಕಂಡಿರ್ಬೇಕು' ಅಂತ ಗೊಣಗುತ್ತಾ ನಡೆದಳು. 

ರಂಗನ್ಗೆ ಫುಲ್ಲು ಕನ್ಫ್ಯೂಷನ್ನು.

ಅಡುಗೆ ಮನೇಲಿದ್ದ ಪದ್ಮ ಮುಖದಲ್ಲಿ ಗೆದ್ದ ನಗು. ಕೈಲಿದ್ದ ಡಬ್ಬಿ ಒಳಗೆ ಲಾಟರಿ ಟಿಕೆಟ್ಟು ನಗುತ್ತಿತ್ತು, ಹೊರಗಡೆ ಖಾರದಪುಡಿ ಅಂತ ಬರೆದಿತ್ತು!!!

ರಂಗ ಮಾತ್ರ ಖಾಲಿ ಆಗಿರೋ ಟ್ಯೂಬಿಂದ ಇವತ್ತು ಹಲ್ಲುಜ್ಜೋಕೆ ಸಿಕ್ರೆ ಸಾಕಪ್ಪಾ ಅಂತ ತನ್ನ ಪ್ರಯತ್ನ ಮುಂದು ವರೆಸಿದ್ದ.

 _______________________________________


                                             - ಕಾವ್ಯಾಮಯಿ 





ಮಂಗಳವಾರ, ಮೇ 7, 2024

ರಾಧೆಯ ಮನದಾಳ

                     ರಾಧೆಯ ಮನದಾಳ 


ಹೇ ಕೃಷ್ಣಾ,

   ನಿನ್ನ ಕೊಳಲ ಇಂಪಾದ ದನಿಗೆ 

  ನೋಡು ಜಗವೆಲ್ಲ ಕಿವಿಯಾಗಿದೆ 

  ಮನದೊಳಗೆ ಇಳಿಯುತ್ತಾ 

 ಆಹ್ಲಾದಗೊಳ್ಳುತ್ತ ತಂಪಾಯಿತು 


ಹೇ ಕೃಷ್ಣಾ,

   ಮಗುವನ್ನು ಲಾಲಿಸುವ ತಾಯಾಗಿ 

  ಮಮತೆ ತುಂಬಿದೊಸರಂತೆ 

  ನೊಂದ ಜೀವ ಸಂಕುಲಕೆ 

  ಹಿತವೆನಿಸಿ ನಿದ್ದೆಗಿಳಿಸಿದೆ.


ಹೇ ಕೃಷ್ಣಾ,

   ನೀ ಹೀಗೆ ನುಡಿಸುವಾಗ 

   ಎಲ್ಲರಂತೆಲ್ಲವನು ಮರೆತು

   ಕಳೆದು ಹೋಗಬಾರದೇಕೆ?

  ಎಂದೆಣಿಸದಿರದೆ ಈ ರಾಧೆಗೆ....

                                   - ಕಾವ್ಯಮಯಿ