ಶುಕ್ರವಾರ, ಸೆಪ್ಟೆಂಬರ್ 6, 2013

ಚಿಂದಿ ಬದುಕು

                     

ಚಿಂದಿ ಚಿಂದಿ ಕಾಗದ, ಕಸದಲ್ಲಿ
ಹುಡುಕಾಟ ಹೊಸ ಕನಸ ಹೊತ್ತ
ಬರಿದು ಬತ್ತಿ ಹೋಗಿರುವ
ಎಳೆಯ ಹೊಳೆಯುವ ಕಂಗಳು.....www.google.com
ಉರುಳು ಬಂಡಿಗಳ ಮೇಲೆ ಹೊರಳುವ
ನಾಗರಿಕರೆಂಬ ಹಣೆಪಟ್ಟಿ ಹೊತ್ತವರು
ಕೆಲವೊಮ್ಮೆ ಅರ್ಥವಿಲ್ಲದ ನಡುದಾರಿಯ ಪಯಣ
ನನ್ನದೆನ್ನುವ ಆಕಾಂಕ್ಷೆಯಿಂದ ತುಳುಕಾಡಿದೆ
ಹೊಸ ತಂತ್ರಜ್ಞಾನವೆಂಬ ಕ್ಷ-ಕಿರಣ!
ನೀರು ಕಾಣದ ಪುಟ್ಟ ಕಾಲ್ಗಳು, ಹರಕಲು ಬಟ್ಟೆ
ಉಣ್ಣಲು ಅನ್ನ ಇಲ್ಲದ ಗೋಣಿ ಹೊರುವ,
ಹೊತ್ತು ಹೊತ್ತು ಬಾಗಿ ಬೆಂಡಾಗಿ ನೆನಪಾಗುವ
’ಗಿಡವಾಗಿ ಬಗ್ಗದು ಮರವಾಗಿ ಬಗ್ಗೀತೇ’ ಗಾದೆ!
ಉರುಳುವ ಬಂಡಿ ನಾಳೆನಿಲ್ಲಬಹುದು
ಗಾಳಿ ಇಲ್ಲದೆ; ಬಹುಶಃ ಇಂಧನ ಮುಗಿದಿರಲು
ಭೂಮಿ ತಲೆಕೆಳಗಾಗಿ ಗಹಗಹಿಸಿ ನಗುವಾಗ
ಚಿಂದಿಯೂ ನಿನ್ನ ಬದುಕು ಬದಲಿಸಬಹುದು
ಸುತ್ತಿ ಸುಡುವ ಕೊಲ್ಲುವ ಹಗಲು ಪ್ರಶ್ನೆಗಳು
ಏನು ವ್ಯತ್ಯಾಸ ಶಾಲೆಗೆ ಹೋಗುವಾಗಲೂ
ಸಂತೆಗೆ ಹೋದಾಗಲೂ ಕೆಲಸಕ್ಕೆ ಹೊರಟರೂ
ಬೆನ್ನಿಗಂಟೇ ಇರುತ್ತಲ್ಲ ಚೀಲ..!
ಎಲ್ಲೆಡೆಯಿಂದ ಆಯುತ್ತಲೇ ಇರುವುದು
ಅದಾಯುವುದು ಚಿಂದಿಯೋ, ಇನ್ನೇನೋ ಗೊತ್ತಿಲ್ಲ..!
ಇಂದು ಕೊಂಡದ್ದು ಚಿಂದಿಯೇ ಅಷ್ಟೇ
ಆದರೂ ಮರೆಯೋಲ್ಲ ಚಿಂದಿ ಚಿಂದಿಯಲೂ
ಬದುಕು ಹುಡುಕುವ ಬಗೆ...!
- ಕಾವ್ಯಮಯಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ