ಮಂಗಳವಾರ, ಅಕ್ಟೋಬರ್ 1, 2013

ನೀನು ಬರಲಿಲ್ಲ...

     
 
 
 

ನೀನು ಬರಲಿಲ್ಲ ಮತ್ತೆ ಇವತ್ತೂ
ನಾ ಕಾಯುತ್ತಿದ್ದೆ ಎಷ್ಟು ಹೊತ್ತು

ಇಂದು ಕಳೆದರೆ ನಾಳೆ ಬೇರೆಯ ಸ್ವತ್ತು
ಅದು ನಿನಗೂ ಅಷ್ಟೇ ಗೊತ್ತು

ಬಿಂದಿಗೆ ತುಂಬಲು ತುಳುಕುತ್ತ ಬರಲು
ಕೈ ಬೀಸಿ ಕರೆದೆ ನೀ ಶಾಲೂ ಶಾಲೂ
ಮನಸ ಪುಟದಲ್ಲಿ ಇನಿಯ ನೀ ನಿಲಲು
ಬಾಳಲ್ಲಿ ಮೊರೆಯಿತು ಪ್ರೀತಿಯ ಕೊಳಲು

ಸ್ವರ್ಣೆಯ ಮಡಿಲಲ್ಲಿ ಹಾಡಿ ಸವಿಗಾನ
ಮಾಡಿಸಿ ಸಿಹಿಮಧುವ ಪಾನ
ತಾಕಿಸಿ ತವಕಿಸಿ ಜುಮ್ಮೆನಿಸಿ ಎನ್ನ
ಎತ್ತ ಹೋದೆಯೊ ಇಂದು ಬಾರದೆ ಚಿನ್ನ...


ತೊಡಿಸಿದೆ ಕಾಲ್ಗೆಜ್ಜೆ ಕೊಡಿಸಿದೆ ಗಿಳಿಯ
ಪ್ರತಿಕ್ಷಣವೂ ಕನವುತ್ತ ಪ್ರಿಯ ಗೆಳೆಯ
ತೊಳಲಾಟವದು ಕಣ್ಣುಮುಚ್ಚಾಲೆಯ
ಊರಿಗೆ ತಿಳಿದರೆ ಆಗುವುದು ಪ್ರಳಯ

ಬಿಟ್ಟು ಬರಲೆಂದು ಅಪ್ಪ ಅಮ್ಮನೆಲ್ಲ
ಎಣಿಸಿ ನಿನ್ನನು ಬಿಟ್ಟು ಬಂಧುಗಳಿಲ್ಲ
ಜೊತೆಗೂಡಿ ಜೀವನ ಪಾಯಸ-ಬೆಲ್ಲ

ದಾರಿಯ ಕಾದರೆ ನಿನ್ನ ಸುಳಿವಿಲ್ಲ!!

                              -ಕಾವ್ಯಮಯಿ

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ