ಮಂಗಳವಾರ, ಅಕ್ಟೋಬರ್ 29, 2013

ಮಳೆಯ ಮಾತು

     

ಹನಿ ಹನಿಯ ಮಳೆ ನೀರು
ಸೋಕಿ ಎನ್ನಯ ಕೆನ್ನೆ
ಕನ್ನೀರ ಹನಿ ಯವುದೆಂದು
ಕುಹಕದಲಿ
ಹೇಳಬಾರದು ನೀನು
ಯಾವ ವ್ಯಥೆಯ.....

ನಾನು ಮೋಡದ ಮನವ
ಕರಗಿಸಿದ ನೋವ
ಕಂಡಿಲ್ಲ
ನಿನ್ನ ನೋವನು ಏಕೆ
ನಾ ತೋರಲಿ?

ಅತ್ತು ಬಿಡು ಒಂದಷ್ಟು
ನೀ ನೋವ ಮರೆವೆ
ನಿನ್ನ ನೋವನು ಮರೆಸೆ
ನಾ ಮತ್ತೆ ಸುರಿವೆ...

 

 

ಗುರುವಾರ, ಅಕ್ಟೋಬರ್ 24, 2013

ಒಂಟಿಭಾವ


ಮರಳಲ್ಲಿ ಬೆರಳ ತುದಿ
ಆಡಿಸುತ ದೂರದಲಿ 
ಅಲೆಗಳನು ಎಣಿಸಿತ್ತು 
ಒಂಟಿಜೀವ 
ಮರಳ ರಾಶಿಯ ಸಮಕೆ 
ಅಲೆಯು ಬಡಿಯುತಲಿತ್ತು 
ಲೆಕ್ಕ ಸರಿಯೋ ತಪ್ಪೋ 
ಮೌನಭಾವ 
ಎನ್ನ ಮನಸಿನ ನೋವು 
ಮರಳೆ ನಿನಗದು  ಸಮವೇ
ತುಂಡು ತುಂಡಲಿ ಹರಿದ
ಒಂಟಿಜೀವ 
ಹೇಳು ಅಲೆಯಬ್ಬರವೆ 
ನನ್ನ ನೋವನು ಅಳಿಸು....
ಹೇಳಲಾರೆಯ ಏಕೆ
ಈ ಮೌನಭಾವ  


  

ಸೋಮವಾರ, ಅಕ್ಟೋಬರ್ 21, 2013

ಹನಿಗವಿತೆಗಳು

 

     ಸಮಯ                                     ವ್ಯರ್ಥ
 
ನದಿ ಮರ ಗಿಡ                             ಕರಗಿತೆನ್ನಲು ವ್ಯರ್ಥ
ಕಲ್ಲು ಬಂಡೆ                                ಕೊಡುವುತೆನ್ನಲು ವ್ಯರ್ಥ
ನಿಂತಲ್ಲೇ ಸವೆಯುವುದು                   ಆವ ಕಾರ್ಯಕೆ ಸೂಕ್ತ
ಇಟ್ಟಹೆಜ್ಜೆ                                  ನಾಲ್ಕು ದಿವಸದ ಕಾಯ
ನಡೆಯುತ್ತಲೇ ಸವೆಯುವುದು              ವ್ಯರ್ಥವೇನು ?                   
ಇಬ್ಬರಿಗೂ ಒಂದೇ ತಾನೆ
ಸಮಯ!
 
 


ನಿರ್ಭಾವ                                                    ಅಮ್ಮ

ಹಲವು ವಿಸ್ಮಯ                       ಒಡಲಲ್ಲಿ ಬಚ್ಚಿಟ್ಟು
ಹಾದಿ                                  ನೋವ ನುಂಗುತ ನಿಂದೆ
ಅಪೂರ್ಣ ಚೇತನ                     ನನಗಾಗಿ ನೀ ನಕ್ಕೆ
ಎಷ್ಟು ಕಾಲವೊ ಬಲ್ಲ                   ನಾ ಅತ್ತು ನೀನತ್ತೆ 
ಜೀವ                                  ನಿನಗಾರು ಸಾಟಿ 
ನಿರ್ಭಾವ.                             ಜಗದೊಳಗೆ ಅಮ್ಮಾ...  
 



ಶನಿವಾರ, ಅಕ್ಟೋಬರ್ 12, 2013

ಶವ ಮತ್ತು ಕಾಗೆ







ಆಕಾಶದ ಪರಿಧಿ ಅಳೆದು
ಹೊಡೆದ ತಲೆ ಗಿರಕಿ ಹನ್ನೆರಡು
ಕೂಗಿ ಕರೆದ ಬಂಧು - ಬಳಗ
ತೆರೆದ ಕಣ್ಣು ಕನಸು ಬೊಗಸೆ
ತೂರಿ ಬೆರಳ ತೊಟ್ಟು ತೊಟ್ಟು
ಹರಿದು ಬರಿದ ಬದುಕು ಕೊನೆಗೆ
ಹೆಸರು ಇದ್ದು ಕರೆದ ಶವ
ಹುಟ್ಟು ಪಡೆದು ಸತ್ತ ಕಾರ‍್ಯ-
ಭಾರವೆಲ್ಲ ಕಾಗೆ ಮೇಲೆ
ಎರಡು ಕ್ಷಣದ ಬಾಯಿ ಮಾತು
ಮರೆತ ಜನರ ಹೊಕ್ಕಲೆಷ್ಟು
ನಡುವೆ ನಡೆದ ರಾಸಲೀಲೆ !?
ಬಡವ ಸಿರಿಕ ಭೇಧವಿರದ
ನ್ಯಾಯಬೆಲೆಯ ಸರ್ವಖಾತೆ
ಬಯಸಿ ಬರಿಸಿ ತಲ್ಲಣಿಸಿ    
ಬೆಚ್ಚನುಸಿರ ತಂಪು ಸೊರಗು
ಮೂವತ್ತು, ಇಪ್ಪತ್ತೈದು,ಹತ್ತು,ಐದು,
ಶೂನ್ಯ.............................
ಏನು ಇದ್ದರೂ ಸುಡುವ ತನಕ......ಇವರ ಶವ
ಸತ್ತ ಮೇಲೆ ....?
ಕರೆಯುತ್ತೇವಲ್ಲ
ಕಾ....ಕಾ....
                          
                                - ಕಾವ್ಯಮಯಿ


ಗುರುವಾರ, ಅಕ್ಟೋಬರ್ 10, 2013

ಮೌನ ನಿವೇದನೆಗೆ...


ಹೃಸ್ವ ,ಧೀರ್ಘ,ಸಂದಿ-ಗೊಂದು
ತತ್ಸಮಗಳ ಹೊಂದಿಕೊಂಡು
ಅರ್ಥ, ವ್ಯರ್ಥ, ಅಲಂಕಾರೋಪಮ
ಮೌನ ನಿವೇದನೆಗೆ ಪೂರ್ಣವಿರಾಮ. 


ಯಿಂದ ,ಗೆ ಗಳ ಕರಣ ಕಾರಕ
ಗುರು ಲಘುಗಳ ಮಧ್ಯೆ ಮರುಕ
ಕರ್ನಾಟ ವೃತ್ತವೃಂದ ಸುತ್ತಿ ಸುತ್ತಿ
ಈ ಮೌನ ನಿವೇದನೆಗೇಕೆ  ಅಂಥ ಬುತ್ತಿ?
 

ಸಾಲು ಅಂಕೆಯ ನುಸುಳಿ ಹಂಸಪಾದ
ನೀರವತೆಯ ಮುಖದಲಿಲ್ಲ ವಿಧ ಸುವಿಧ
ಮೌನ ಹೇಳುವ ಗಂಧ, ರೂಪ, ರಸ
ಎದುರು ನಿಲ್ಲುದೆ ಶಬ್ದಮಣಿಯ ಕೋಶ?
                                         - ಕಾವ್ಯಮಯಿ
 


 

ಮಂಗಳವಾರ, ಅಕ್ಟೋಬರ್ 1, 2013

ಸುಗಿಪುಗ ತುಳುನಾಡ ಐಸಿರಿನ್








 

ಪಡ್ಡಾಯಿ ಕಡಲಡ್ದ್ ಬೀಜುನ ತಂಪುಡು
ನಿನೆತ್ಂಡ್ ನಾಚ್ಂಡ್ ತುಳುಮಣ್ಣ್
ಗಂಧೊದ ಕಮ್ಮೆನ ಉಡಲ್ ಗ್ ಜತ್ತ್ಂಡು
ಸುಗಿಪುಗ ತುಳುನಾಡ ಐಸಿರಿನ್

ಬರ್ಸೊದ ಪನಿ ಪನಿ ಬಾನ್ ಡ್ ಓಕುಳಿ
ಎಂಚಿತ್ತಿ ಸಂಭ್ರಮೊಡ್ ಈ ಕಣ್ಣ್
ನಲಿಪುನ ಕೈಯ್ ಕಂಡೊ ತೆಲಿಪುನ ಪಕ್ಕಿಲು
ಸುಗಿ ಪುಗ ತುಳುನಾಡ ಐಸಿರಿನ್

ಪೂ ಪಿಂಗಾರೊದ ಉಸುಲುದ ಪರ್ಬ
ಪೊದೆಪಾದ್ ಅರಳುಂಡ್ ಸಾವಿರೊ ಬಣ್ಣ
ಮೋಕೆ ಸಿಂಗಾರೊದ ಸ್ವರ್ಗೊನೆ ಮುಲ್ಪ
ಸುಗಿಪುಗ ತುಳುನಾಡ ಐಸಿರಿನ್


                                  -ಕಾವ್ಯಮಯಿ

 

ನನ್ನ ಬಾಲ್ಯದಾಟಗಳು




ಅಟ್ಟ ಮುಟ್ಟ ತನ್ನ ದೀವಿ
ಬೆರಳುಗನು ಎಣಿಸುತಾ
ಕದ್ದು ಮುಚ್ಚೆ ಗಾಡೆ ಗೂಡೆ
ಅಜ್ಜಿಯನ್ನು ಕಾಡುತಾ
ಮರಕೋತಿ, ಗಿಣ್ಣಿದಾಂಡು

ಸೋಲದಂತೆ ಗೆಲ್ಲುತಾ
ಟೊಂಕಲಾಟ,ಲಗೋರಿಯಲ್ಲಿ
ಮೈಮನವನು ಕುಣಿಸುತಾ
ಟೊಪ್ಪಿ ಬೇಕಾ ಟೊಪ್ಪಿ ಆಡಿ
ಗೆಳೆಯರನ್ನು ಅಟ್ಟುತಾ
ಕೆರೆದಡವನು ಈಜಿ ಬಂದು
ಅವಲಕ್ಕಿ ಪಾಯಸ ಉಣ್ಣುತಾ
ಕಳೆದೆವೆಂಥ ಮಧುರ ಬಾಲ್ಯ
ಕ್ಷಣಗಳನ್ನು ನೆನೆಯುತಾ
ಜೊತೆಗೆ ಒಮ್ಮೆ ಆಟವಾಡೆ
ಬಳಗವನ್ನೆ ಕರೆದು ತಾ

                
                     -ಕಾವ್ಯಮಯಿ
 

ನೀನು ಬರಲಿಲ್ಲ...

     
 
 
 

ನೀನು ಬರಲಿಲ್ಲ ಮತ್ತೆ ಇವತ್ತೂ
ನಾ ಕಾಯುತ್ತಿದ್ದೆ ಎಷ್ಟು ಹೊತ್ತು

ಇಂದು ಕಳೆದರೆ ನಾಳೆ ಬೇರೆಯ ಸ್ವತ್ತು
ಅದು ನಿನಗೂ ಅಷ್ಟೇ ಗೊತ್ತು

ಬಿಂದಿಗೆ ತುಂಬಲು ತುಳುಕುತ್ತ ಬರಲು
ಕೈ ಬೀಸಿ ಕರೆದೆ ನೀ ಶಾಲೂ ಶಾಲೂ
ಮನಸ ಪುಟದಲ್ಲಿ ಇನಿಯ ನೀ ನಿಲಲು
ಬಾಳಲ್ಲಿ ಮೊರೆಯಿತು ಪ್ರೀತಿಯ ಕೊಳಲು

ಸ್ವರ್ಣೆಯ ಮಡಿಲಲ್ಲಿ ಹಾಡಿ ಸವಿಗಾನ
ಮಾಡಿಸಿ ಸಿಹಿಮಧುವ ಪಾನ
ತಾಕಿಸಿ ತವಕಿಸಿ ಜುಮ್ಮೆನಿಸಿ ಎನ್ನ
ಎತ್ತ ಹೋದೆಯೊ ಇಂದು ಬಾರದೆ ಚಿನ್ನ...


ತೊಡಿಸಿದೆ ಕಾಲ್ಗೆಜ್ಜೆ ಕೊಡಿಸಿದೆ ಗಿಳಿಯ
ಪ್ರತಿಕ್ಷಣವೂ ಕನವುತ್ತ ಪ್ರಿಯ ಗೆಳೆಯ
ತೊಳಲಾಟವದು ಕಣ್ಣುಮುಚ್ಚಾಲೆಯ
ಊರಿಗೆ ತಿಳಿದರೆ ಆಗುವುದು ಪ್ರಳಯ

ಬಿಟ್ಟು ಬರಲೆಂದು ಅಪ್ಪ ಅಮ್ಮನೆಲ್ಲ
ಎಣಿಸಿ ನಿನ್ನನು ಬಿಟ್ಟು ಬಂಧುಗಳಿಲ್ಲ
ಜೊತೆಗೂಡಿ ಜೀವನ ಪಾಯಸ-ಬೆಲ್ಲ

ದಾರಿಯ ಕಾದರೆ ನಿನ್ನ ಸುಳಿವಿಲ್ಲ!!

                              -ಕಾವ್ಯಮಯಿ

 

ಸೋಮವಾರ, ಸೆಪ್ಟೆಂಬರ್ 30, 2013

ಆಕಳು









ಅಮ್ಮ ನೋಡು ದೊಡ್ಡಿಯಲ್ಲಿ
ಪುಟ್ಟ ಪಾಪು ಹುಟ್ಟಿದೆ

ಎಷ್ಟು ಚಂದ ಅದರ ಮೊಗವು

ಜಿಗಿದು ಹಾರಿ ಕುಣಿದಿದೆ 


ಅದರ ಅಮ್ಮ ಗೌರಿ ದನವು
ಮುದ್ದಿಸುತ್ತಾ ನಿಂತಿದೆ
ಕುಣಿದು ಹಸಿದ ಕಂದಮ್ಮಗೆ

ತನುವ ಅಮೃತ ನೀಡಿದೆ



ದೊಡ್ಡ ಕಣ್ಣು ಚಿಕ್ಕ ಬಾಲ
ಗೆಳೆಯ ಸಿಕ್ಕ ಆಡಲು

ಅಕ್ಕಪಕ್ಕ ಮನೆಯ ಮಂದಿ

ಬಂದರವನ ನೋಡಲು


ಎನ್ನ ಅಮ್ಮ ಕೃಷ್ಣನೆಂದು
ಹೆಸರ ಕೂಗಿ ಕರೆವಳು

ಅಂಬಾ ಎನುತಲೋಡಿ ಬರುವ

ನಮ್ಮ ಪ್ರೀತಿ ಆಕಳು

     
                -ಕಾವ್ಯಮಯಿ




 

ಭಾನುವಾರ, ಸೆಪ್ಟೆಂಬರ್ 15, 2013

ಬಾಲ್ಯ ಮತ್ತು ಚಂದಮಾಮ






ಗ್ರಹ , ತಾರೆ , ರವಿ, ಚಂದ್ರ, ಪುಂಜ, ದಿಗಂತ
ದೂರದತ್ತಲೇ ಸಾಗುವ ಓ ಗೆಳೆಯ,
ನೀನು ಕಳೆದ ಸುಂದರ  ರಜತ
ವಸಂತಗಳ ನೆನಪಿದೆಯ?

ಆ ಬಾಲ್ಯ!  ಕಂಕುಳಲ್ಲಿ ಮಮ್ಮುಣ್ಣುತ್ತಾ
ಕಂಡ ಚಂದಮಾಮನ ತೋಟ
ಮಿನುಮಿನುಗಿ ಬೆರಗು ಭ್ರಮೆ ಎತ್ತ ನೋಡಿದರತ್ತ
ಅಮ್ಮನೆಂದಳು ಅವಗುಂಟು ಅಮಾವಾಸ್ಯೆ ಕಾಟ !

ತಂದುಕೊಡು ನನಗಿಂದು ಆ ಚಂದಮಾಮ
ಇಲ್ಲದಿರೆ ನನಗೇನು ಬೇಡ  ನೀ ಕೇಳು.
ಜಾಸ್ತಿ ಹಟ ಮಾಡದಿರು ಬಂದು ಬಿಟ್ಟರೆ ಗುಮ್ಮ!?
ಮತ್ತೆ ಬರುವನು ಮೂಡಿ ನಾಲ್ಕು ದಿನ ತಾಳು...

ಇಂದು ನಿನ್ನೆಯದಲ್ಲ ಮಾಮ - ಮಗುವಿನ ಬಂಧ
ಹಿರಿದು ನಾವಾದಷ್ಟೆ  ವಿಸ್ಮಯದ ಗೂಡು;
ನಾಳೆ ಕೇಳುವನು ಮತ್ತೆ ನಿನ್ನಯ ಕಂದ
ಅಪ್ಪ ತಾ ನಂಗೆ ಆ ಚಂದದಾ ಚೆಂಡು !

ಬಾಲ್ಯದ ನಂಟಲ್ಲಿ  ಹುದುಗಿರುವ ಕೌತುಕ
ಪಕ್ವವಾದಂತೆಯೂ ಮನಸು ಮಗುವು,
ಅಂದೆಲ್ಲ ದೂರಬಾನಿನ ಕನಸಿನ ಶಶಾಂಕ
ಹೊಸ ನನಸ ಯಾನದಲಿ ಗೆಳೆಯ ನೀನು , ನಾವು ... !

                                                      
                                                            - ಕಾವ್ಯಮಯಿ
 

ಶುಕ್ರವಾರ, ಸೆಪ್ಟೆಂಬರ್ 6, 2013

ಚಿಂದಿ ಬದುಕು

                     

ಚಿಂದಿ ಚಿಂದಿ ಕಾಗದ, ಕಸದಲ್ಲಿ
ಹುಡುಕಾಟ ಹೊಸ ಕನಸ ಹೊತ್ತ
ಬರಿದು ಬತ್ತಿ ಹೋಗಿರುವ
ಎಳೆಯ ಹೊಳೆಯುವ ಕಂಗಳು.....www.google.com
ಉರುಳು ಬಂಡಿಗಳ ಮೇಲೆ ಹೊರಳುವ
ನಾಗರಿಕರೆಂಬ ಹಣೆಪಟ್ಟಿ ಹೊತ್ತವರು
ಕೆಲವೊಮ್ಮೆ ಅರ್ಥವಿಲ್ಲದ ನಡುದಾರಿಯ ಪಯಣ
ನನ್ನದೆನ್ನುವ ಆಕಾಂಕ್ಷೆಯಿಂದ ತುಳುಕಾಡಿದೆ
ಹೊಸ ತಂತ್ರಜ್ಞಾನವೆಂಬ ಕ್ಷ-ಕಿರಣ!
ನೀರು ಕಾಣದ ಪುಟ್ಟ ಕಾಲ್ಗಳು, ಹರಕಲು ಬಟ್ಟೆ
ಉಣ್ಣಲು ಅನ್ನ ಇಲ್ಲದ ಗೋಣಿ ಹೊರುವ,
ಹೊತ್ತು ಹೊತ್ತು ಬಾಗಿ ಬೆಂಡಾಗಿ ನೆನಪಾಗುವ
’ಗಿಡವಾಗಿ ಬಗ್ಗದು ಮರವಾಗಿ ಬಗ್ಗೀತೇ’ ಗಾದೆ!
ಉರುಳುವ ಬಂಡಿ ನಾಳೆನಿಲ್ಲಬಹುದು
ಗಾಳಿ ಇಲ್ಲದೆ; ಬಹುಶಃ ಇಂಧನ ಮುಗಿದಿರಲು
ಭೂಮಿ ತಲೆಕೆಳಗಾಗಿ ಗಹಗಹಿಸಿ ನಗುವಾಗ
ಚಿಂದಿಯೂ ನಿನ್ನ ಬದುಕು ಬದಲಿಸಬಹುದು
ಸುತ್ತಿ ಸುಡುವ ಕೊಲ್ಲುವ ಹಗಲು ಪ್ರಶ್ನೆಗಳು
ಏನು ವ್ಯತ್ಯಾಸ ಶಾಲೆಗೆ ಹೋಗುವಾಗಲೂ
ಸಂತೆಗೆ ಹೋದಾಗಲೂ ಕೆಲಸಕ್ಕೆ ಹೊರಟರೂ
ಬೆನ್ನಿಗಂಟೇ ಇರುತ್ತಲ್ಲ ಚೀಲ..!
ಎಲ್ಲೆಡೆಯಿಂದ ಆಯುತ್ತಲೇ ಇರುವುದು
ಅದಾಯುವುದು ಚಿಂದಿಯೋ, ಇನ್ನೇನೋ ಗೊತ್ತಿಲ್ಲ..!
ಇಂದು ಕೊಂಡದ್ದು ಚಿಂದಿಯೇ ಅಷ್ಟೇ
ಆದರೂ ಮರೆಯೋಲ್ಲ ಚಿಂದಿ ಚಿಂದಿಯಲೂ
ಬದುಕು ಹುಡುಕುವ ಬಗೆ...!
- ಕಾವ್ಯಮಯಿ


ಬುಧವಾರ, ಸೆಪ್ಟೆಂಬರ್ 4, 2013

ಕೊಳದ ತಡಿಯ ಅಲೆಗಳು















ಕೈಯ ಬೆರಳಲ್ಲಿ ನೀ ನೀರ ಅಲೆಯ
ತವಕಿಸುತ ನಸುನಕ್ಕೆಯಾ? ನಿನ್ನ ಬಿಂಬವ
ಕದಡಿ ಅಲೆ ನೂರು ಸಾಗಿತ್ತಾ
ಸಾಗಿತ್ತಾ ಬಲು ದೂರ ತೀರ

ಕೊಳದ ತಡಿ ಹಸಿ ಹಸಿರು
ಹೂ ಬಳ್ಳಿ ಸಾಲು; ಯಾರೊಳಗು
ವ್ಯಥೆ ತುಂಬಿ ಬಾಡಿ ಹೋದಂತೆ
ಇರಲಾರನೆಂಬವು...

ತಿಳಿ ಮುಗಿಲ ನಡುವಲ್ಲಿ ಕರಿ ಮೋಡ
ಗುಡುಗುವ ಭಯಾಟ್ಟಹಾಸ
ಎದೆ ಸೀಳಿ ಹೊಕ್ಕ ಮಿಂಚು
ಸುರಿಸಿದ ರಕ್ತ ಹಾದಿ ತುಂಬ

ಅಳಿಸಿ ಹೋಗುವ ಸಾವಿರ
ಹೆಜ್ಜೆ ಗುರುತಿನ ಸೋನೆ
ಸುರಿ ಸುರಿದು ಹರಿಯಿತು
ಮನವ ದಾಟಿ ;ಎಲ್ಲೆ ಮೀರಿ
                 
                                 -ಕಾವ್ಯಮಯಿ