ಮಂಗಳವಾರ, ಸೆಪ್ಟೆಂಬರ್ 16, 2014

ತವರು ಮನೆ ಚಿಂತೆ

ವರುಷವೆರಡಾಯಿತು
ಹಬ್ಬಕ್ಕೆ ತವರಿಗೆ ಹೋಗಿಲ್ಲ
ಚೌತಿ, ಪಂಚಮಿ, ಷಷ್ಠಿ , ಅಷ್ಟಮಿ, ನವಮಿ
ಹಬ್ಬಗಳಲ್ಲ ದಿನಗಳಂತೆ ಜಾರಿಹೋಗಿಯಲ್ಲ ..
ಹಸುವು ಹಡೆದಿದೆಯಂತೆ; ನಾಯಿ ಕಳೆದಿದೆಯಂತೆ;
ತಂಗಿಯನು ನೋಡಲು ವರ ಬರುವನಂತೆ.
ಅಮ್ಮನಿಗೆ ಸೌಖ್ಯವು  , ಅಪ್ಪನಿಗೆ ಮೀನ್ಸಾರು
ಇಲ್ಲವೆನ್ನಲು ಸಾಮ್ಯತೆಯದೆ ಗೊಂದಲ
ಪದ್ಮಿನಿಯು ಬಸುರಂತೆ ; ಮಾವಮಿಡಿ ಚಿಗುರಂತೆ ;
ಬಳೆಗಾರ್ತಿ ಹೊಸಬಗೆಯ ಬಳೆ ತರುವಳಂತೆ
ಎರಡೇ ದಿನ ಹೋಗಿ ಬರಲೆನ್ನ ಹಂಬಲ
ವರುಷವೆರಡಾಯಿತು
ಹಬ್ಬಕ್ಕೂ ತವರಿಗೆ ಹೋಗಿಲ್ಲ


                                                 -ಕಾವ್ಯಮಯಿ 

ಸೋಮವಾರ, ಸೆಪ್ಟೆಂಬರ್ 15, 2014

ನಾ ಕಂಡ ಗಾಂಧಾರಿ

ನಾ ಕಂಡ ಗಾಂಧಾರಿ
ಅಲ್ಲಲ್ಲಿ ಬೀದಿಗಳಲಿ 
ಸೆರಗೆಳೆದು ನಡೆಯುತ್ತಿದ್ದಾಳೆ;
ಸುಗಂಧದ ಸುಳಿವಿಲ್ಲದೆ
ರಣಬಿಸಿಲಲ್ಲಿ ಬೇಯುತ್ತಿದ್ದಾಳೆ
ಸುತ್ತಿಕೊಂಡಿದ್ದಾಳೆ  ಬಟ್ಟೆ
ಕಣ್ಣಿಗಷ್ಟೇ ಅಲ್ಲ ಬಾಯಿಗು !
ಕುರುಡನಲ್ಲದ ಕುಡುಕ ಗಂಡನ
ದರಬಾರಿನಲಿ ಇಂದು
ದ್ರೌಪದಿಗು  ಹೀನವಾಗಿ
ಬತ್ತಲಾಗಿದ್ದಾಳೆ .
ಅಲ್ಲತ್ತ ಭೀಷ್ಮ ಕೃಪರ
ಮಾತಿಗೂ ಬೆಲೆಯಿಲ್ಲ;
ಇತ್ತ ಊರವರ ದುರ್ಯೋಧನ
ತನ್ನ ಮಗನೆನ್ನಲು
ಮಮತೆ ಕೇಳುವುದಿಲ್ಲ !!
ಬದುಕಿನಿತು ರಣರಂಗ-
ವಾಯ್ತೆಂದು ವ್ಯಥಿಸಿದರೂ
ಸಂಜೆಯೂಟಕೆ  ಮತ್ತವಳೇ ದುಡಿಬೇಕಲ್ಲ!!

                                           - ಕಾವ್ಯಮಯಿ