ಮಂಗಳವಾರ, ಸೆಪ್ಟೆಂಬರ್ 16, 2014

ತವರು ಮನೆ ಚಿಂತೆ

ವರುಷವೆರಡಾಯಿತು
ಹಬ್ಬಕ್ಕೆ ತವರಿಗೆ ಹೋಗಿಲ್ಲ
ಚೌತಿ, ಪಂಚಮಿ, ಷಷ್ಠಿ , ಅಷ್ಟಮಿ, ನವಮಿ
ಹಬ್ಬಗಳಲ್ಲ ದಿನಗಳಂತೆ ಜಾರಿಹೋಗಿಯಲ್ಲ ..
ಹಸುವು ಹಡೆದಿದೆಯಂತೆ; ನಾಯಿ ಕಳೆದಿದೆಯಂತೆ;
ತಂಗಿಯನು ನೋಡಲು ವರ ಬರುವನಂತೆ.
ಅಮ್ಮನಿಗೆ ಸೌಖ್ಯವು  , ಅಪ್ಪನಿಗೆ ಮೀನ್ಸಾರು
ಇಲ್ಲವೆನ್ನಲು ಸಾಮ್ಯತೆಯದೆ ಗೊಂದಲ
ಪದ್ಮಿನಿಯು ಬಸುರಂತೆ ; ಮಾವಮಿಡಿ ಚಿಗುರಂತೆ ;
ಬಳೆಗಾರ್ತಿ ಹೊಸಬಗೆಯ ಬಳೆ ತರುವಳಂತೆ
ಎರಡೇ ದಿನ ಹೋಗಿ ಬರಲೆನ್ನ ಹಂಬಲ
ವರುಷವೆರಡಾಯಿತು
ಹಬ್ಬಕ್ಕೂ ತವರಿಗೆ ಹೋಗಿಲ್ಲ


                                                 -ಕಾವ್ಯಮಯಿ 

ಸೋಮವಾರ, ಸೆಪ್ಟೆಂಬರ್ 15, 2014

ನಾ ಕಂಡ ಗಾಂಧಾರಿ

ನಾ ಕಂಡ ಗಾಂಧಾರಿ
ಅಲ್ಲಲ್ಲಿ ಬೀದಿಗಳಲಿ 
ಸೆರಗೆಳೆದು ನಡೆಯುತ್ತಿದ್ದಾಳೆ;
ಸುಗಂಧದ ಸುಳಿವಿಲ್ಲದೆ
ರಣಬಿಸಿಲಲ್ಲಿ ಬೇಯುತ್ತಿದ್ದಾಳೆ
ಸುತ್ತಿಕೊಂಡಿದ್ದಾಳೆ  ಬಟ್ಟೆ
ಕಣ್ಣಿಗಷ್ಟೇ ಅಲ್ಲ ಬಾಯಿಗು !
ಕುರುಡನಲ್ಲದ ಕುಡುಕ ಗಂಡನ
ದರಬಾರಿನಲಿ ಇಂದು
ದ್ರೌಪದಿಗು  ಹೀನವಾಗಿ
ಬತ್ತಲಾಗಿದ್ದಾಳೆ .
ಅಲ್ಲತ್ತ ಭೀಷ್ಮ ಕೃಪರ
ಮಾತಿಗೂ ಬೆಲೆಯಿಲ್ಲ;
ಇತ್ತ ಊರವರ ದುರ್ಯೋಧನ
ತನ್ನ ಮಗನೆನ್ನಲು
ಮಮತೆ ಕೇಳುವುದಿಲ್ಲ !!
ಬದುಕಿನಿತು ರಣರಂಗ-
ವಾಯ್ತೆಂದು ವ್ಯಥಿಸಿದರೂ
ಸಂಜೆಯೂಟಕೆ  ಮತ್ತವಳೇ ದುಡಿಬೇಕಲ್ಲ!!

                                           - ಕಾವ್ಯಮಯಿ 



ಗುರುವಾರ, ಆಗಸ್ಟ್ 28, 2014

ಆನೆಮೊಗದ ಕಂದನೀತ


ಸಿದ್ಧಿಯ ಕೊಡು ಬುದ್ಧಿಯ ಕೊಡು ವಿಘ್ನರಾಜನೇ
ಯುಕ್ತಿಯ ಕೊಡು ಶಕ್ತಿಯ ಕೊಡು ಗೌರೀವರನೇ
ಆನೆಮೊಗದ ಕಂದನೀತ  ಈಶ ತನಯನು
ಆನಂದನೀವ ನಂದನಿವ ಮೋದಕ ಪ್ರಿಯನು
                             ( ದೇವ ಮೋದಕ ಪ್ರಿಯನು )

ಮೊದಲ ಪೂಜೆ ಮಾಡಿ ನಿನಗೆ ನಮಿಸುವೆನು
ಆರತಿ  ಕರ್ಪೂರ ಬೆಳಗಿ ಪೂಜಿಪೆನು
ಮನದಿ ನಿನ್ನ ಭಕುತಿಯಿಂದ ಸ್ತುತಿಸುವೆನು
ಗುಣಾತೀತ ನಿನ್ನ ಪಾಡಿ ಭಜಿಸುವೆನು
                             ( ಪಾಡಿ ಭಜಿಸುವೆನು )

ಅನವರತವು ಬಿಡದೆ ನಿತ್ಯ ನಿನ್ನ ಧ್ಯಾನ
ನೂರೆಂಟು ನಾಮಸ್ಮರಣೆಯಲ್ಲಿಹೆ ಗವಿನ
ಬಯಸುವೆನು ಆಗಲೊಮ್ಮೆ ನಿನ್ನ ದರುಶನ
ನೀ ಭುವಿಗಿಳಿದು ಹರಸಲೆನ್ನ ಜನುಮ ಪಾವನ
                             ( ಎನ್ನ ಜನುಮ ಪಾವನ )

ಚೌತಿಯದಿನ ಮೈಗೆ ಹಚ್ಚಿಕೊಂಡು ಗಂಧ
ಮೂಷಿಕವನು  ಏರಿ ಬರಲು ಏನು ಅಂದ
ಗರಿಕೆ ಹುಲ್ಲ ಸವಿಯ ಮೆದ್ದ ವಕ್ರತುಂಡ  
ಜಗಕೆ ಸರ್ವ ಕೃಪೆಯ ತೋರು ಫಾಲಚಂದ್ರ
                             ( ತೋರು ಫಾಲಚಂದ್ರ )


                                 - ಕಾವ್ಯಮಯಿ






ಮಂಗಳವಾರ, ಜೂನ್ 24, 2014

ಮೌನಸ್ವರ

ಅಂತರಂಗದಿ ಅವಿತ ತಂತಿಯ 
ನುಡಿಸಬಲ್ಲುದ ಕಲಿಸಿದೆ 
ರಾಗ ಸ್ವರಗಳು ಸರಿಗೆ ಬರಲು 
ನುಡಿಯ ನಿಲ್ಲಿಸಿ ಮರಳಿದೆ.!

ಧೂಳು ಹಿಡಿದಿದೆ ಸ್ವರವು  ಕಟ್ಟಿದೆ
ಗುಡಿಸಬೇಕು ಎಡೆ  ಎಡೆ 
ಮತ್ತೆ ಮೌನದ ಸ್ವರವ ಕೇಳಲು
ಸ್ವಚ್ಛ ಹೃದಯವು ಬರುತಿರೆ ....

ತಡೆಯಲಾಗದು ಹಾಡಲಾಗದು
ಉಗುಳು ಗಂಟಲ ಇಳಿಯಲಾಗದು!
ನಿನ್ನ 'ರಾಗ'ದಿ ಕಲಿತ ನುಡಿಗಳ
ಹೊಸತು ಹೃದಯವು ಅರಿಯಲಾಗದು....  





ಬುಧವಾರ, ಜನವರಿ 1, 2014

ಶಬ್ದ ಮತ್ತು ಅರ್ಥ


ಕಳೆದು ಹೋಗಿದೆ ಅನಿಸುತ್ತೆ 
ಮುಖದ ಕಳೆ ,ಶಕ್ತಿ ,ಧೈರ್ಯ 
ಕಾಲೆತ್ತಿ  ಬದಿಗಿರಿಸಲೂ ಬಂದಿದೆ 
ತರ ತರಹದ ಮೆಶಿನ್ನು !
ನಿಲ್ಲದ ನಿಮಿಷದಲ್ಲೂ ಅರ್ಧ 
ಚಮಚ ಅನ್ನ ಉಣ್ಣಲು 
ಅಪಹಾಸ ! ಡಯಟಿಂಗು . 
ಬಂಡಿಗಳ ಮೇಲೆಯೇ  ಉರುಳಿ ಉರುಳಿ 
ಬದುಕುವ ಜೀವನ ಚಕ್ರ 
ವಾಹನಗಳ ಕಿರುಚಾಟ 
ಟಿ.ವಿ ,ಡ್ರಮ್ಮು ಗಳದ್ದೇ ಸದ್ದು 
ಕಣ್ಣು ಸುಡಲು ಒಂದಷ್ಟು 
ಬಗೆ ಬಣ್ಣದ ಬೆರಗು !
ಜಾಹಿರಾತುಗಳ ಅಬ್ಬರ 
ಉಚಿತಗಳ ವಿಚಿತ್ರ ಭಂಡಾರ 
ತೋರಿಸುವುದು ವಿಟಮಿನ್ನು 
ಹೊಕ್ಕುವುದು ಖತರ್ನಾಕ್ ವಿಷ 
ಇದರೆಡೆಯಲ್ಲೇ ಎಲ್ಲೋ ಕಳೆದು 
ಹೋಗಿದ್ದಾನೆ ನಾನು ಹುಡುಕುತ್ತಿರುವ 
'ಮನುಷ್ಯ' ಎನ್ನುವ ಮನುಷ್ಯ
ಗಿಜಿಗುಡುವ ಸದ್ದನ್ನು
ಅರೆಕ್ಷಣ ನಿಲ್ಲಿಸಿ
ಅಕ್ಕಪಕ್ಕದ ರಾಶಿ ವಸ್ತುಗಳನ್ನು
ಬದಿಗೆ ಸರಿಸಿ ಹುಡುಕಾಡಬೇಕು
ಶಾಂತವಾಗಿ ಕೇಳಬೇಕು ...ಒಂದೊಂದೇ ...
ಪ್ರಕೃತಿಯು ಅವನಿಗಾಗಿ ನೀಡಿದ
ಹೃದಯದ ಬಡಿತ ...
ಲಬ್ ಡಬ್...  ಲಬ್ ಡಬ್ ...
ಅದಕಿಂತ ಹೆಚ್ಚಿಗೆ
ಬೇರಾವ ಶಬ್ದಕೂ
ಅರ್ಥವಿಲ್ಲ............. !!!

             - ಕಾವ್ಯಮಯಿ