ಸೋಮವಾರ, ಸೆಪ್ಟೆಂಬರ್ 30, 2013

ಆಕಳು









ಅಮ್ಮ ನೋಡು ದೊಡ್ಡಿಯಲ್ಲಿ
ಪುಟ್ಟ ಪಾಪು ಹುಟ್ಟಿದೆ

ಎಷ್ಟು ಚಂದ ಅದರ ಮೊಗವು

ಜಿಗಿದು ಹಾರಿ ಕುಣಿದಿದೆ 


ಅದರ ಅಮ್ಮ ಗೌರಿ ದನವು
ಮುದ್ದಿಸುತ್ತಾ ನಿಂತಿದೆ
ಕುಣಿದು ಹಸಿದ ಕಂದಮ್ಮಗೆ

ತನುವ ಅಮೃತ ನೀಡಿದೆ



ದೊಡ್ಡ ಕಣ್ಣು ಚಿಕ್ಕ ಬಾಲ
ಗೆಳೆಯ ಸಿಕ್ಕ ಆಡಲು

ಅಕ್ಕಪಕ್ಕ ಮನೆಯ ಮಂದಿ

ಬಂದರವನ ನೋಡಲು


ಎನ್ನ ಅಮ್ಮ ಕೃಷ್ಣನೆಂದು
ಹೆಸರ ಕೂಗಿ ಕರೆವಳು

ಅಂಬಾ ಎನುತಲೋಡಿ ಬರುವ

ನಮ್ಮ ಪ್ರೀತಿ ಆಕಳು

     
                -ಕಾವ್ಯಮಯಿ




 

ಭಾನುವಾರ, ಸೆಪ್ಟೆಂಬರ್ 15, 2013

ಬಾಲ್ಯ ಮತ್ತು ಚಂದಮಾಮ






ಗ್ರಹ , ತಾರೆ , ರವಿ, ಚಂದ್ರ, ಪುಂಜ, ದಿಗಂತ
ದೂರದತ್ತಲೇ ಸಾಗುವ ಓ ಗೆಳೆಯ,
ನೀನು ಕಳೆದ ಸುಂದರ  ರಜತ
ವಸಂತಗಳ ನೆನಪಿದೆಯ?

ಆ ಬಾಲ್ಯ!  ಕಂಕುಳಲ್ಲಿ ಮಮ್ಮುಣ್ಣುತ್ತಾ
ಕಂಡ ಚಂದಮಾಮನ ತೋಟ
ಮಿನುಮಿನುಗಿ ಬೆರಗು ಭ್ರಮೆ ಎತ್ತ ನೋಡಿದರತ್ತ
ಅಮ್ಮನೆಂದಳು ಅವಗುಂಟು ಅಮಾವಾಸ್ಯೆ ಕಾಟ !

ತಂದುಕೊಡು ನನಗಿಂದು ಆ ಚಂದಮಾಮ
ಇಲ್ಲದಿರೆ ನನಗೇನು ಬೇಡ  ನೀ ಕೇಳು.
ಜಾಸ್ತಿ ಹಟ ಮಾಡದಿರು ಬಂದು ಬಿಟ್ಟರೆ ಗುಮ್ಮ!?
ಮತ್ತೆ ಬರುವನು ಮೂಡಿ ನಾಲ್ಕು ದಿನ ತಾಳು...

ಇಂದು ನಿನ್ನೆಯದಲ್ಲ ಮಾಮ - ಮಗುವಿನ ಬಂಧ
ಹಿರಿದು ನಾವಾದಷ್ಟೆ  ವಿಸ್ಮಯದ ಗೂಡು;
ನಾಳೆ ಕೇಳುವನು ಮತ್ತೆ ನಿನ್ನಯ ಕಂದ
ಅಪ್ಪ ತಾ ನಂಗೆ ಆ ಚಂದದಾ ಚೆಂಡು !

ಬಾಲ್ಯದ ನಂಟಲ್ಲಿ  ಹುದುಗಿರುವ ಕೌತುಕ
ಪಕ್ವವಾದಂತೆಯೂ ಮನಸು ಮಗುವು,
ಅಂದೆಲ್ಲ ದೂರಬಾನಿನ ಕನಸಿನ ಶಶಾಂಕ
ಹೊಸ ನನಸ ಯಾನದಲಿ ಗೆಳೆಯ ನೀನು , ನಾವು ... !

                                                      
                                                            - ಕಾವ್ಯಮಯಿ
 

ಶುಕ್ರವಾರ, ಸೆಪ್ಟೆಂಬರ್ 6, 2013

ಚಿಂದಿ ಬದುಕು

                     

ಚಿಂದಿ ಚಿಂದಿ ಕಾಗದ, ಕಸದಲ್ಲಿ
ಹುಡುಕಾಟ ಹೊಸ ಕನಸ ಹೊತ್ತ
ಬರಿದು ಬತ್ತಿ ಹೋಗಿರುವ
ಎಳೆಯ ಹೊಳೆಯುವ ಕಂಗಳು.....www.google.com
ಉರುಳು ಬಂಡಿಗಳ ಮೇಲೆ ಹೊರಳುವ
ನಾಗರಿಕರೆಂಬ ಹಣೆಪಟ್ಟಿ ಹೊತ್ತವರು
ಕೆಲವೊಮ್ಮೆ ಅರ್ಥವಿಲ್ಲದ ನಡುದಾರಿಯ ಪಯಣ
ನನ್ನದೆನ್ನುವ ಆಕಾಂಕ್ಷೆಯಿಂದ ತುಳುಕಾಡಿದೆ
ಹೊಸ ತಂತ್ರಜ್ಞಾನವೆಂಬ ಕ್ಷ-ಕಿರಣ!
ನೀರು ಕಾಣದ ಪುಟ್ಟ ಕಾಲ್ಗಳು, ಹರಕಲು ಬಟ್ಟೆ
ಉಣ್ಣಲು ಅನ್ನ ಇಲ್ಲದ ಗೋಣಿ ಹೊರುವ,
ಹೊತ್ತು ಹೊತ್ತು ಬಾಗಿ ಬೆಂಡಾಗಿ ನೆನಪಾಗುವ
’ಗಿಡವಾಗಿ ಬಗ್ಗದು ಮರವಾಗಿ ಬಗ್ಗೀತೇ’ ಗಾದೆ!
ಉರುಳುವ ಬಂಡಿ ನಾಳೆನಿಲ್ಲಬಹುದು
ಗಾಳಿ ಇಲ್ಲದೆ; ಬಹುಶಃ ಇಂಧನ ಮುಗಿದಿರಲು
ಭೂಮಿ ತಲೆಕೆಳಗಾಗಿ ಗಹಗಹಿಸಿ ನಗುವಾಗ
ಚಿಂದಿಯೂ ನಿನ್ನ ಬದುಕು ಬದಲಿಸಬಹುದು
ಸುತ್ತಿ ಸುಡುವ ಕೊಲ್ಲುವ ಹಗಲು ಪ್ರಶ್ನೆಗಳು
ಏನು ವ್ಯತ್ಯಾಸ ಶಾಲೆಗೆ ಹೋಗುವಾಗಲೂ
ಸಂತೆಗೆ ಹೋದಾಗಲೂ ಕೆಲಸಕ್ಕೆ ಹೊರಟರೂ
ಬೆನ್ನಿಗಂಟೇ ಇರುತ್ತಲ್ಲ ಚೀಲ..!
ಎಲ್ಲೆಡೆಯಿಂದ ಆಯುತ್ತಲೇ ಇರುವುದು
ಅದಾಯುವುದು ಚಿಂದಿಯೋ, ಇನ್ನೇನೋ ಗೊತ್ತಿಲ್ಲ..!
ಇಂದು ಕೊಂಡದ್ದು ಚಿಂದಿಯೇ ಅಷ್ಟೇ
ಆದರೂ ಮರೆಯೋಲ್ಲ ಚಿಂದಿ ಚಿಂದಿಯಲೂ
ಬದುಕು ಹುಡುಕುವ ಬಗೆ...!
- ಕಾವ್ಯಮಯಿ


ಬುಧವಾರ, ಸೆಪ್ಟೆಂಬರ್ 4, 2013

ಕೊಳದ ತಡಿಯ ಅಲೆಗಳು















ಕೈಯ ಬೆರಳಲ್ಲಿ ನೀ ನೀರ ಅಲೆಯ
ತವಕಿಸುತ ನಸುನಕ್ಕೆಯಾ? ನಿನ್ನ ಬಿಂಬವ
ಕದಡಿ ಅಲೆ ನೂರು ಸಾಗಿತ್ತಾ
ಸಾಗಿತ್ತಾ ಬಲು ದೂರ ತೀರ

ಕೊಳದ ತಡಿ ಹಸಿ ಹಸಿರು
ಹೂ ಬಳ್ಳಿ ಸಾಲು; ಯಾರೊಳಗು
ವ್ಯಥೆ ತುಂಬಿ ಬಾಡಿ ಹೋದಂತೆ
ಇರಲಾರನೆಂಬವು...

ತಿಳಿ ಮುಗಿಲ ನಡುವಲ್ಲಿ ಕರಿ ಮೋಡ
ಗುಡುಗುವ ಭಯಾಟ್ಟಹಾಸ
ಎದೆ ಸೀಳಿ ಹೊಕ್ಕ ಮಿಂಚು
ಸುರಿಸಿದ ರಕ್ತ ಹಾದಿ ತುಂಬ

ಅಳಿಸಿ ಹೋಗುವ ಸಾವಿರ
ಹೆಜ್ಜೆ ಗುರುತಿನ ಸೋನೆ
ಸುರಿ ಸುರಿದು ಹರಿಯಿತು
ಮನವ ದಾಟಿ ;ಎಲ್ಲೆ ಮೀರಿ
                 
                                 -ಕಾವ್ಯಮಯಿ